Monday 29 June 2015

ಯಾರೇ ನೀ ಅಭಿಮಾನಿ.......?


ಅಂದು ಎಕ್ಸಾಂ ಸೆಂಟರ್‍ಗೆ ಎಂಟ್ರಿ ಕೊಟ್ಟರೆ ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ಯಾಕೆಂದು ನನಗೆ ಅರ್ಥ ಆಗಲಿಲ್ಲ. ಅವರ ನೋಟ ಕಾಡಿನಿಂದ ತಪ್ಪಿಸಿಕೊಂಡು ಬಂದ ಪ್ರಾಣಿಯ ನೋಡಿದವರಂತೆ ಇತ್ತು. ನನಗೆ ಮುಜುಗರವಾಯ್ತು. ಆಪ್ತಮಿತ್ರ ಶಿವು ನನ್ನ ಹತ್ತಿರ ಕರೆದು ಏನಾಗಿದೆ ಇವರಿಗೆ ಹೀಗೆ ನೋಡ್ತಿದ್ದಾರಲ್ಲಾ ಯಾಕೆ? ಎಂದಾಗ.
ಲೋ ನೀನು ಜೀನ್ಸ್ ಪ್ಯಾಂಟ್ ಟೀ ಶರ್ಟ್ ಹಾಕಿದ್ದಿಯಲ್ಲ ಅದಕ್ಕೆ ಎಂದನು. ನಾನೇನು ಯಾರು ಹಾಕದೇ ಇರೊದನ್ನ ಹಾಕಿದ್ದೆನೆನೋ ಹಾಗಲ್ಲ ಕಣೊ ಅಲ್ಲಿ ನೊಡೋ ಎಂದು ತಿರುಗಿ ಕ್ಯಾಂಪಸಿನಲ್ಲಿದ್ದವರನ್ನು ನೋಡಿದೆ ಹುಡುಗರೆಲ್ಲರು ಫಾರ್‍ಮಲ್  ಶರ್ಟ್  ಮತ್ತು ಪ್ಯಾಂಟ್, ಹುಡುಗಿಯರು ಸೀರೆ ತೊಟ್ಟಿದ್ದರು.
ನನಗೆ ಆಗ ಅರ್ಥವಾಯಿತು ಅದು ಬಿಎಡ್ ಎರಡನೇ ಸೆಮಿಸ್ಟರ್ ಎಕ್ಸಾಂ ಆಗಲೇ ಎಲ್ಲರು ಮೇಷ್ಟು, ಮೇಡಂ ಆಗಿದ್ದರು. ನನಗೆ ಯಾಕೂ ಅದು ಇಷ್ಟ ಆಗಲಿಲ್ಲ ಯಾಕೆಂದರೆ ಫಾರ್‍ಮಲ್ ಡ್ರೆಸ್ ಹಾಕಿ ಹಾಕಿ ಸಾಕಾಗಿತ್ತು ನನ್ನಿಸ್ಟದಂತೆ ನಾನು ಡ್ರೆಸ್ ಹಾಕಿದ್ದು ಅವರಿಗೆ ವಿಚಿತ್ರ ಅನ್ನಿಸಿತ್ತು.
ಇದನ್ನ ನಿಧಾನವಾಗಿ ಬಿಡಿಸಿ ಶಿವುಗೆ ಹೇಳಿದ್ದೆ ನೋಡು ಮಗಾ ನಾನು ಬೇರೆಯವರಿಗೋಸ್ಕರ ಬದುಕೊದಿಲ್ಲ ನನಗೋಸ್ಕರ ನಾನ್ ಬದುಕುತ್ತೇನೆ. ನನ್ ಲೈಫ್ ನನ್ನಿಸ್ಟ. ನನ್ನಿಂದ ಆ ರೀತಿ ಇರೋಕೆ ಆಗಲ್ಲ. ನನ್ ಈ ರೀತಿ ಡ್ರೆಸ್ ಹಾಕೋದರಿಂದ ಇನ್ನೊಬ್ಬರಿಗೆ ತೊಂದರೆ ಆಗುತ್ತದೆ ಅಂದರೆ ಬದಲಾವಣೆ ಮಾಡಿಕೊಳ್ಳೂಣ ಅದನ್ನು ಬಿಟ್ಟು ಬೇರೆ ಯಾವುದೋ ವಿಷಯಕ್ಕೆ ಬದಲಾಗೋದಿಲ್ಲ.
ಮರುದಿನ ಎಕ್ಸಾಂಗೆ ಬಂದಾಗ ಒಬ್ಬಳು ಹುಡುಗಿ ಹಾಯ್ ಎಂದಳು ಎಲ್ಲೂ ನೋಡಿದ ಹಾಗೆ ಅನ್ನಿಸಿತು. ಆದರೆ ನೆನಪಿಗೆ ಬರಲಿಲ್ಲ ನಾನು ಅವರಿಗೆ ಗೊತ್ತಿರ ಬೇಕು ಎಂದು ಹಾಯ್ ಅಂದೆ ಟಿಫನ್ ಆಯ್ತ ಎಂದರು ಹಾ ಆಯ್ತು ಎಂದೆ ನಿಮ್ಮದು ಆಯ್ತ ಎಂದೆ ಆಯ್ತು ಎಂದು ಸರಿ ನಮ್ಮ ಫ್ರಂಡ್ಸ್ ಕಾಯುತ್ತಿದ್ದಾರೆ ಬರುತ್ತೇನೆ ಎಂದು ಹೊರಟು ಹೋದಳು.
ಹಿಂದಿನಿಂದ ನಮ್ಮನ್ನೇ ಗಮನಿಸುತ್ತಾ ಬರುತ್ತಿದ್ದ ಶಿವ ಏನ್ ಮಗಾ ಲಾಡು ಬಂದು ಬಾಯಿಗೆ ಬಿತ್ತಾ, ಇಲ್ಲಾ ಮಗಾ ಹಲ್ವಾ ಬಂದು ಬಾಯಿಗೆ ಬಿತ್ತು. ನನ್ನೇ ಕಿಂಡಲ್ ಮಾಡ್ತಿಯಾ ಹಾಗೇನು ಇಲ್ಲ ಕಣೋ ಯಾರೋ ಅವಳು ನನಗೆ ಗೊತ್ತಿಲ್ಲ ಕಣೋ ಇದೇ ಫಸ್ಟ್ ಟೈಮ್ ಮಾತನಾಡಿಸುತ್ತಿರುವುದು. ಅದಕ್ಕೆ ಅವನು ಸಮಾಧಾನ ನೆನ್ನೆ ನೀನು ಡ್ರೆಸ್ ಬಗ್ಗೆ ಹೇಳುತ್ತಿದ್ದೆಯಲ್ಲ ಆಗ ನಿನ್ನ ಹಿಂದೆ ಕುಳಿತಿದ್ದಳು. ನೆನ್ನೆ ಸೀರೆ ಹಾಕಿಕೊಂಡು ಬಂದಿದ್ದಳು ಇವತ್ತು ಜೀನ್ಸ್ ಪ್ಯಾಂಟ್ ಟೀ ಶರ್ಟ್ ಹಾಕಿಕೊಂಡು ಬಂದಿದ್ದಾಳೆ. ನೋಡು ಎಷ್ಟು ಜನಕ್ಕೆ ಇನ್ಸ್ಪಿರೇಷನ್ ನೀನು ಎಂದು ನಗುತ್ತಾ ಹೇಳಿದನು.
ಅವಳು ಹೋಗುವುದನ್ನು ನೋಡುತ್ತಾ ನಮಗೆ ಗೊತ್ತಿಲ್ಲದಂತೆ ನಾವು ಕೆಲವರಿಗೆ ಇನ್ಸ್ಪಿರೇಷನ್ ಆಗ್ತಿವಿ ನೋಡು ಮಗಾ ಎಂದು ನಗುತ್ತಾ ಹೇಳಿದ್ದಕ್ಕೆ ಸಾಕಪ್ಪ ಸಾಕು, ಟೈಂ ಆಯ್ತು ನಡಿ ಎಂದು ಎಕ್ಸಾಂ ಹಾಲ್ ಕಡೆ ನಡೆಸಿದನು.
ಮರುದಿನ ಮತ್ತೊಂದು ಎಕ್ಸಾಂಗೆ ಬರುವಾಗ ಗೆಳತಿಯರ ಗುಂಪಲ್ಲಿ ಲೂಸ್‍ಹೇರ್ ಬಿಟ್ಟುಕೊಂಡು  ಕಲರ್ ಫುಲ್ ಚೂಡಿದಾರ್ ಹಾಕಿಕೊಂಡು ಫುಲ್ ಫ್ಯಾಷನ್ ಆಗಿ ಬಂದಿದ್ದಳು ಹತ್ತಿರ ಬಂದು ಹಾಯ್ ಎಂದು ಮುಂಗುರುಳನ್ನು ಕಿವಿಯ ಮೇಲೆ ಸಿಕ್ಕಿಸಿದಳು ಅವಳ ಗೆಳತಿಯರು ಇವಳನ್ನು ಬಿಟ್ಟು ಮುಂದೆ ಹೋದರು. ಇವಳು ನಾನ್ ಸ್ಟಾಫ್ ಮಾತು ಆರಂಭಿಸಿ ಮಾತನಾಡಿ ಸರಿ ಆಮೇಲೆ ಸಿಗುತ್ತೇನೆ ಎಂದು ಮಾಯವಾದಳು. ಒಂದು ಕ್ಷಣ ಹಾಗೆ ನಿಂತು ನಾನು ಇವತ್ತು ಎಕ್ಸಾಂ ಬರೆಯುತ್ತೀನ? ಎಂದು ಅನುಮಾನ ಶುರುವಾಯಿತು.
ರಾತ್ರಿಯೆಲ್ಲ ನಿದ್ರೆಗೆಡಿಸಿಬಿಟ್ಟಳು ಯಾರಿವಳು? ಯಾರಿವಳು? ಅಷ್ಟು ಜನರನ್ನು ಬಿಟ್ಟು ಯಾಕೆ ನನ್ನೆ ಯಾಕೆ ಮಾತನಾಡಿಸುತ್ತಿದ್ದಾಳೆ ಎಂದು ಯೋಚಿಸಿ ಸರಿ ನಾಳೆ ಅವಳ ಹೆಸರು ವಿಳಾಸ ತಿಳಿದುಕೊಳ್ಳೋಣ ಎಂದು ನಿರ್ಧಾರ ಮಾಡಿ ಮರುದಿನ ಎಕ್ಸಾಂಗೆ ಹೊರಟೆ.
ಆದರೆ ಅವತ್ತು ಅವಳೇ ಕಾಣಿಸಲಿಲ್ಲ ಬರಿ ಕನಸಿರಬೇಕೆಂದು ತಿಳಿದು ಎಕ್ಸಾಂ ಹಾಲ್‍ಗೆ ಹೊರಟೆ. ಬರಬೇಕಾದರೆ ಮತ್ತೆ ಎದುರಾದಳು ಆ ಬೆಡಗಿ ಬಂದ ವೇಗದಲ್ಲೇ ಮಿರ ಮಿರನೆ ಕಣ್ಣು ಮಿಟುಗಿಸುತ್ತಾ ಪಟ ಪಟನೆ ಮಾತನಾಡಿದಳು ಅವಳ ಮುಖವನ್ನೆ ನೋಡುತ್ತಿದ್ದ ನಾನು ಹೆಸರನ್ನು ಕೆಳದೆ ಹಾಗೆ ನಿಂತಿದ್ದೆ ಮತ್ತೆ ಸಿಗೋಣ ಎಂದು ಹೊರಟು ಹೋದಳು. ಅವಳಿಗಾಗಿ ಮನದ ಮೂಲೆಯಲ್ಲಿ ಮೌನದ ಗೋಪುರ ಕಟ್ಟಿ ಕಾಯುತ್ತಿದ್ದೇನೆ.


-ಮಂಜುನಾಥ ಹೆಚ್.ಆರ್.