Monday 29 February 2016




ಗೆಳೆಯನ ಫಸ್ಟ್ ಲವ್ ಲೆಟರ್.........!
  
  ಮಳೆಗಾಲದಲ್ಲಿ ಮಳೆ ಬೀಳುವ ರೀತಿ ಟಿನೇಜ್‍ನಲ್ಲಿ ಮೋಹನ್‍ಗೆ ಲವ್ ಆಗಿತ್ತು. ಮಾನವ ಅನ್ನೊ ಪ್ರಾಣಿಗೆ ಲವ್ ಆದ್ರೆ ಏನೇನ್ ಆಗುತ್ತೋ ಆ ಎಲ್ಲ ಲಕ್ಷಣಗಳು ಅವನಲ್ಲಿ ಎದ್ದು ಕಾಣುತ್ತಿದ್ದವು. ಅದು ಅವನ ಅತ್ತೆ ಮಗಳು ಜ್ಯೋತಿಯ ಮೇಲೆ. ಅವಳಿಗೆ ತನ್ನ ಪ್ರೀತಿಯನ್ನ ಹೃದಯಕ್ಕೆ ತಟ್ಟುವಂತೆ ಹೇಗೆ ಹೇಳಬೇಕು ಎಂದು ಗೊತ್ತಾಗದೆ ತುಂಬ ತಲೆ ಕೆಡಿಸಿಕೊಂಡು ಮಟ ಮಟ ಮಧ್ಯಾಹ್ನದಲ್ಲಿ ನಕ್ಷತ್ರ ಎಣಿಸೊ ಕೆಲಸ ಮಾಡುತ್ತಿದ್ದ. ಆಗಲೊ ಈಗಲೊ ಮರಿಹಾಕುವ ಬೆಕ್ಕಿನ ಹಾಗೆ ಇತ್ತು ಅವನ ಪರಿಸ್ಥಿತಿ.
   ಅವನ ಪಾಡನ್ನು ನೋಡಿಯು ನೊಡಲಾಗದೆ ಇರಲು ನಾವೇನು ಅವನ ಸಂಬಂಧಿಗಳಾಗಿರಲಿಲ್ಲ ಅದೇನೋ ಚಡ್ಡಿ ದೋಸ್ತಿ ಅಂತರಲ್ಲ ಹಾಗೇನು ಇರಲಿಲ್ಲ ಚಿಕ್ಕ ವಯಸ್ಸಿನಲ್ಲಿ ಚಡ್ಡಿ ಎಲ್ಲಿಗೆ ಹಾಕೊಬೇಕು ಎಂದು ಗೊತ್ತಾಗದೆ ತಲೆ ಮೇಲೆ ಹಾಕಿಕೊಂಡು ಓಡಾಡುತ್ತಿದ್ದ ದೋಸ್ತಿಗಳು. ಎಲ್ಲ ಫ್ರೆಂಡ್ಸ್ ತಮ್ಮ ತಮ್ಮ ಕಷ್ಟ-ಸುಖಗಳನ್ನ ತಮ್ಮ ತಮ್ಮ ಫ್ರೆಂಡ್ಸ್ ಹತ್ರ ಹೇಳಿಕೊಳ್ಳುವ ಹಾಗೆ ಅವನು ತನ್ನ ಪ್ರೇಮ ಕಥೆಯನ್ನು ನಮ್ಮ ಬಳಿ ಬಿಚ್ಚಿಟ್ಟನು.
ನಿಧಾನವಾಗಿ ಮಹೇಶ್, ಮನು ಯೋಚನೆ ಮಾಡುತ್ತ ಇದಕ್ಕೆ ಒಂದು ಉಪಾಯ ಮಾಡಲೇ ಬೇಕು ಅಂತ ಒಂದು ದಿನ ರಾತ್ರಿ ಮಹೇಶನ ತೋಟದ ಮನೆಯಲ್ಲಿ ಗುಂಡಿನ ಪಾರ್ಟಿ ಇಟ್ಟರು. ಅವರಿಗೆ ಕುಡಿಯುವುದಕ್ಕೆ ಅಂತ ನಾಲ್ಕು ಬಿಯರ್ ಮತ್ತು ಅದರ ಜೊತೆಗೆ ಸ್ನ್ಯಾಕ್ಸ್ ತಂದಿದ್ದನು ಮೋಹನ. ಇದು ಸಾಲದು ಅಂತ ಮೂರು ಜನಕ್ಕೂ ಬಿರಿಯಾನಿ ಕಟ್ಟಿಸಿಕೊಂಡು ಬಂದಿದ್ದನು. ಅದೇ ಫಸ್ಟ್ ಟೈಮ್ ಎಲ್ಲರು  ಹಾಟ್ ಡ್ರಿಂಕ್ಸ್ ಕುಡಿಯುತ್ತಿರುವುದು. ಯಾರೋ ಹೇಳೀದ್ದರಂತೆ ಎಣ್ಣೆ ಹೊಡೆದರೆ ಒಳ್ಳೆ ಒಳ್ಳೆ ಐಡಿಯಾ ಬರುತ್ತವೆ ಅಂತ ಅದನ್ನ ನೆನಪು ಮಾಡಿಕೊಂಡು ಮಹೇಶ ಮೋಹನನಿಗೆ ಈ ಡಬ್ಬ ಐಡಿಯಾ ಕೊಟ್ಟಿದ್ದ ಪಾಪ ಮೂಕ ಪ್ರಾಣಿ ಮುಂದೆ ಬಂದರೆ ಹಾಯುವುದಿಲ್ಲ ಹಿಂದೆ ಬಂದರೆ ಒದೆಯುವುದಿಲ್ಲ ಅಂತ ಸ್ಥಿತಿ ಮೋಹನನದಾಗಿತ್ತು ಮೂಗನ ಕೂಗಿಗೆ ಮೋಡ ಕರಗಿ ಮಳೆ ಹನಿ ಬಂದರು ಬರಬಹುದೆಂದು ನಂಬಿದ್ದ.
   ಅಂದು ಒಂಬತ್ತು ಗಂಟೆಗೆ ಸರಿಯಾಗಿ ಊರು ಖಾಲಿ ಮಾಡಿ ಮಹೇಶನ ತೋಟದ ಮನೆಯನ್ನು ಸೇರಿದರು. ಅಮವಾಸ್ಯೆಯ ಕತ್ತಲಲ್ಲಿ ಹುಣ್ಣಿಮೆಯ ಬೆಳಕನ್ನು ಕಾಣುವ ಆಸೆ ಮೋಹನನದಾಗಿತ್ತು. ತೋಟದ ಮನೆಯ ಬಾಗಿಲನ್ನು ತೆರೆದು ಒಳಗೆ ಮೂರು ಜನರು ಕುಳಿತುಕೊಂಡರು. ಮೋಹನ ಲೋ ನೀವು ಹೇಳಿದ ಹಾಗೆ ಮಾಡಿದಿನಿ ಲವ್ ಲೆಟರ್ ಬರೆಯೋಕೆ ಐಡಿಯಾ ಕೊಡ್ರೊ, ಇವನ ಮಾತು ಮುಗಿಯುವುದರಲ್ಲಿ ಮನು ನಾವಿನ್ನು ಎಣ್ಣೆನೇ ಹೊಡೆದಿಲ್ಲ ಮೊದಲು ಕುಡಿಯೋಣ ಆಮೇಲೆ ಐಡಿಯಾ ಕೊಡ್ತಿವಿ ಸ್ವಲ್ಪ ಸಮಾದಾನ ಮಾಡ್ಕೊಳೊ.
    ಒಂಬತ್ತು ತಿಂಗಳು ಕಾಯ್ದವನಿಗೆ ಇನ್ನ ಒಂದು ದಿನ ಕಾಯೋಕೆ ಆಗಲ್ವ ಎಂದು ಮನಸ್ಸಿನಲ್ಲಿ ಗೊಣಗುತ್ತ ಲೋಟದೊಳಗೆ ಬಿಯರ್ ಸುರಿದನು ಮೋಹನ. ಮನು ಮೊದಲು  ಸ್ನ್ಯಾಕ್ಸ್ ತಿನ್ನಬೇಕಾ, ಬಿಯರ್ ಕುಡಿಬೇಕಾ ಇದಕ್ಕೆ ಮಹೇಶ ಲೋ ಮನು ನಾನೇನ್ ನಿನ್ನ ಕಣ್ಣಿಗೆ ದೊಡ್ಡ ಕುಡುಕನ ಹಾಗೆ ಕಾಣಿಸ್ತಿದಿದಿನ?, ನನಗೇನೊ ಹಾಗೆ ಕಾಣೀಸ್ತಿದಿಯ ಎಂದನು ಮನು, ಲೋ ಮಾತು ಸಾಕು ಬೇಗ ಕುಡಿದು ನನಗೊಂದು ಒಳ್ಳೆ ಐಡಿಯಾ ಕೊಡ್ರೊ. ಆಯ್ತು ಆಯ್ತು ಕೊಡ್ತಿವಿ, ನೀನು ಹೀಗೆ ಟಾರ್ಚರ್ ಕೊಡ್ತಿದ್ರೆ ನಾವ್ ಹೊರಟೊಗ್ತಿವಿ ಅಷ್ಟೆ. ಒಳ್ಳೆ ಫ್ರೆಂಡ್ಸ್ ಸಹವಾಸ ಆಯ್ತಲ್ಲ, ಆಯ್ತು ಬಿಡ್ರೊ ಮಾತಾಡಲ್ಲ ನಿಮಗೆ ಯಾವಾಗ ಹೇಳಬೇಕು ಅನ್ನಿಸುತ್ತದೆಯೊ ಆಗಲೇ ಹೇಳಿ ಎಂದು ಒಲ್ಲದ ಮನಸ್ಸಿನಿಂದ ಹೇಳಿದ.
    ಮಹೇಶ್, ಮನು ಕುಡಿಯಲು ಆರಂಭಿಸಿದರು ಮೋಹನ್ ನೀನು ಕುಡಿಯೋ ಬೇಡ ಕಣೋ ನೀವು ಕುಡಿಯಿರಿ, ಹೋ ನಿಮ್ಮ ಹುಡುಗಿ ಬೇಜಾರ್ ಮಾಡಿಕೊಳ್ಳುತ್ತಾರೆ ಅಂತನಾ ನಾವ್ಯಾರು ಹೇಳಲ್ಲಪ್ಪ ಕುಡಿಯೋ, ಮೋಹನನ ಮುಖ ಕೆಂಪಾಗಿದ್ದನ್ನು ಕಂಡು ಮನು ಆಯ್ತು ಬಿಡಪ್ಪ ಅದಕ್ಕೆ ಯಾಕೆ ಮುಖ ಊದಿಸ್ಕೊಳ್ತಿಯ. ಚೆನ್ನಾಗಿ ಕುಡಿದು ಮೋಹನ್ ನಾವೀಗ ಎಲ್ಲಿದಿವಿ ಎಂದನು ಮಹೇಶ, ಹಾ! ಎಂದು ರಾಗ ಎಳೆದ ಮೋಹನ್ ಹರಿಶ್ಚಂದ್ರ ಘಾಟಲ್ಲಿ, ಮಗನೇ ಈಗ ನನಗೆ ಲೆಟರ್ ಬರೆಯೋಕೆ ಐಡಿಯಾ ಕೊಡದೆ ಇದ್ರೆ ನಾವು ಎಲ್ಲಿದಿವಿ ಅಂತ ಹೇಳಲ,,,, ಕಳೀಸ್ತಿನಿ?
     ಮಹೇಶ ಇವನ ಕಾಟ ತಡೆಯೋಕೆ ಆಗ್ತಿಲ್ಲ ಇವನಿಗೆ ನೀನೆ ಒಂದು ಐಡಿಯಾ ಕೊಡೊ ಎಂದನು ಮನು. ಲೋ ಮನು ನಾನು ಯಾವ ಎಕ್ಸ್ಸ್‍ಪೀರಿಯನ್ಸ್ ಹ್ಯಾಂಡೊ, ಲವ್ ಬಗ್ಗೆ ನನಗೇನೊ ಗೊತ್ತು ? ನೀನೆ ಹೇಳೊ ಮನು, ನಾನೇನು ನಾಲ್ಕೈದು ಹುಡುಗಿಯರನ್ನ ಲವ್ ಮಾಡಿದಿನಾ? ನನಗೆ ಅದರ ಬಗ್ಗೆ ಏನು ಗೊತ್ತಿಲ್ಲ ನೀನೆ ಹೇಳೋ ಎಂದು ಒಬ್ಬರನೊಬ್ಬರು ವಾದ ಮಾಡುತ್ತಿದ್ದರು. ನಿಲ್ಲಿಸ್ರೋ ನಿಮ್ಮ ಗಲಾಟೆನ ನಾನೇನೊ ನೀವುಗಳು ದೊಡ್ಡ ಮೇಧಾವಿಗಳು ಅಂತ ಕರ್ಕೋಂಡು ಬಂದೆನಲ್ಲ ನನ್ನ ಸವೆದು ಹೋದ ಪಾದರಕ್ಷೆಯನ್ನ ತೆಗೆದುಕೊಂಡು ಮುಟ್ಟಿ ನೋಡ್ಕೊಳೊ ಹಾಗೆ ಹೊಡ್ಕೊಬೇಕು.
     ಹಾಗಲ್ಲ ಮೋಹನ, ಸರಿ ನೀನು ಬರೆಯೋಕೆ ಸ್ಟಾರ್ಟ್ ಮಾಡು ಎಂಬ ಮಹೇಶನ ಮಾತಿಗೆ ಸಮಾಧಾನವಾಗಿ ಮೋಹನ ಪೆನ್ನು ಹಿಡಿದು ಮಹೇಶನ ಮಾತಿಗಾಗಿ ಕಾಯುತ್ತ ಕುಳಿತ. ನನ್ನ ಪ್ರೀತಿ ಜ್ಯೋತಿ, ಲೋ ನಾವೇನ್ ಲವ್ ಲೆಟರ್ ಬರಿತಿದಿವ ಇಲ್ಲ ಲೀವ್ ಲೆಟರ್ ಬರಿತಿದಿವ ಇಲ್ಲ ಅಪ್ಪ, ಅಮ್ಮನಿಗೆ ಪತ್ರ ಬರಿತಿದಿವ ನನ್ನ ಪ್ರೀತಿಯ ಜ್ಯೋತಿ ಅಂತೆ ಎಂದು ಮಹೇಶನ ಮೇಲೆ ಮನು ರೇಗಿದನು. ಮೈ ಡಿಯರ್ ಸ್ವಿಟ್ ಗರ್ಲ್, ಹೋ ಇವನು ಹೇಳ್ದ ನೋಡಪ್ಪ ಯಾಕೆ ಹಾಟ್ ಗರ್ಲ ಅಲ್ವ, ಇವನೇನು ದೊಡ್ಡ ಮೇಧಾವಿತರ ಎಲ್ಲ ಗೊತ್ತು ಅನ್ನೊ ಹಾಗೆ ಮಾತಾಡ್ತಾನೆ ಸಾಕು ಮಾಡಪ್ಪ ನಿನ್ನ ಸ್ವಿಟ್, ಹಾಟ್ ಎಂದು ಮಹೇಶ ಮನುವಿನ ಬಾಯಿ ಮುಚ್ಚಿಸಿದ. ಹಾಗೇ ನಿಧಾನವಾಗಿ ಅವರಿಬ್ಬರು ನಿದ್ರೆಗೆ ಜಾರಿದರು.
      ಇವರಿಬ್ಬರನ್ನು  ನೆಚ್ಚಿಕೊಂಡರೆ ನನ್ನ ಪ್ರೀತಿಗೆ ಎಳ್ಳು ನೀರೆ ಎಂದು ತಾನೇ ತನಗೆ ತೋಚಿದ ಹಾಗೇ ಬರೆಯಲು ಆರಂಭಿಸಿದ ಎಂಟು ಹಾಳೆಗಳು ಹರಿದು ಒಂಬತ್ತನೆ ಪತ್ರ ಬರೆಯುವುದರೊಳಗೆ ನಿದ್ರೆಗೆ ಜಾರಿದ್ದ. ಮುಂಜಾನೆ ಯಾರೊ ಎಚ್ಚರಿಸಿದಂತಾಗಿ ಎದ್ದು ಕುಳಿತು ತನ್ನ ಪ್ರೀತಿ ತುಂಬಿದ ಭಾವನೆಗಳನ್ನ ಬಿಳಿ ಹಾಳೆಯ ಮೇಲೆ ಕಪ್ಪು ಅಕ್ಷರಗಳನ್ನ ಮೂಡಿಸಲು ಪ್ರಾರಂಭಿಸಿದ್ದ. ಜ್ಯೋತಿಯನ್ನ ಚಿಕ್ಕವಯಸ್ಸಿನಲ್ಲಿ ಕಂಡದ್ದು, ಕೇಳಿದ್ದು, ಅವಳ ಜೊತೆ ಕಳೆದ ಒಂದೊಂದು ಕ್ಷಣದ ಅನುಭವ ಎಲ್ಲವನ್ನು ಸೇರಿಸಿ ಒಂದು ಪ್ರೇಮ ಪತ್ರವನ್ನು ಬರೆದನು. ಅದು ಎಂತ ಹುಡುಗಿಯಾದರು ಅದನ್ನೊಮ್ಮೆ ಒದಿದರೆ ಸಾಕು ನನಗೆ ಇಂತಹ ಲವ್ವರ್ ಇದ್ದಿದ್ದರೆ ಎಂದು ಒಂದರೆಕ್ಷಣ ಅನ್ನಿಸಿಬಿಡಬೇಕು ಹಾಗಿತ್ತು.
  ಯಾರೋ ಹೇಳಿದ ಮಾತುಗಳು ಮತ್ಯಾರೋ ಬರೆದುಕೊಟ್ಟ ಲೆಟರ್ ನಿಂದ ತಮ್ಮ ಪ್ರೀತಿಯನ್ನ ಗೆಲ್ಲಲು ಸಾಧ್ಯಾವಾಗುವುದು ಕೆಲವು ಸಲ ಮಾತ್ರ ಆದರೆ ಅವನ/ಅವಳ ಮೇಲೆ ನಿಜವಾದ ಪ್ರೀತಿ ಎಂಬುದಿದ್ದರೆ ಅದೇ ಅವನ/ಅವಳ ಕುರಿತು ಪ್ರೇಮ ಪತ್ರವನ್ನು ಬರೆಯಲು ಪ್ರೇರೇಪಿಸುತ್ತದೆ, ಪ್ರೀತಿಯನ್ನು ಪಡೆಯುವ ದಾರಿಯನ್ನು ತೋರಿಸುತ್ತದೆ. 
ಮಂಜುನಾಥ ಹೆಚ್.ಆರ್.
ಮೊ : 8747001391
e-mail : manjunathahr1991@gmail.com

No comments:

Post a Comment