Saturday 27 February 2016

ಹಳೆ ಕಥೆ ಹೊಸ ವ್ಯೆಥೆ

                   ಮುಂಗಾರಿನ ಮಳೆ ತಂದ ಮರೆಯಲಾಗದ ನೆನೆಪು .....

      ಆಫೀಸಿನಿಂದ ಹೊರಡುವ ವೇಳೆಗೆ ಸಮಯ 5 ಗಂಟೆಯಾಗಿತ್ತು ಆಚೆ ಬಂದು ನೋಡಿದರೆ ಬೈಕ್ ಪಂಚರ್ ಯಾವುದಾದರು ಆಟೋ ಸಿಗಬಹುದೆಂದು ರೋಡ್ ಕಡೆ ನೋಡಿದರೆ ಒಂದು ಸಣ್ಣ ಬೈಸಿಕಲ್ ಕೂಡ ಕಾಣಿಸಲಿಲ್ಲ. ಮನೆ ಇರುವುದು ಇನ್ನೆಷ್ಟು ದೂರ 2 ಕಿ.ಮೀ ನಡೆದೇ ಹೋಗೊಣ ಎಂದು ಕಾಲಿಗೆ ಬಲವನ್ನು ತುಂಬಿ ಬೈಕ್ ಆಫೀಸ್‍ನಲ್ಲೆ ಬಿಟ್ಟು ಮನೆಕಡೆ ಹೆಜ್ಜೆ ಹಾಕಿದೆ.
    ರವಿ ಮಾಮನು ಹಗಲಿಗೆ ವಿದಾಯವನ್ನು ಹೇಳಿ ಹೊರಡುವ ಸಮಯ. ನಿಧಾನವಾಗಿ ಕಪ್ಪನೆಯ ಮೋಡ ಭೂಮಿಯನ್ನು ಆವರಿಸುತ್ತಿತ್ತು. ನಡೆದದ್ದು ಕೇವಲ ಅರ್ಧ ಕಿ.ಮೀ ಅಷ್ಟರಲ್ಲಿ ವರುಣನ ಆಗಮನ ಈ ಧರೆಯ ಮೇಲೆ ಈ ನನ್ನ ಧರೆ ( ಮೈ ) ಮೇಲೆ ಆಯಿತು. ಪಕ್ಕದ ಬಸ್ ಸ್ಟಾಪ್ ಬಳಿ ನಿಂತು ಹೊರಡೊಣವೆಂದು ಆಶ್ರಯ ಪಡೆದೆ. ಮಳೆ ಹನಿಯು ಜೋರಾಗಿ ಬಡಿದು ನಂತರ ಸಣ್ಣ ಹನಿಗಳು ಬೀಳಲು ಪ್ರಾರಂಭಿಸಿದ್ದವು. ಬಸ್ ಸ್ಟಾಪ್‍ನಲ್ಲಿ ಒಬ್ಬನೆ ನಿಂತು ಸಾಕಾಗಿ ಹೋಗಿತ್ತು ಮೊಬೈಲ್ ತೆಗೆದು ನೋಡಿದರೆ ಸ್ವಿಚ್ ಆಫ್ ಬೇರೆ. ಒಂದು ಸಾರಿ ಮೋಡವನ್ನು ದಿಟ್ಟಿಸಿ ನೋಡಿ ರಸ್ತೆಯ ಕಡೆ ಮುಖ ಮಾಡಿದೆ. ಅಲ್ಲಿ ಹೈಸ್ಕೂಲು ವಯಸ್ಸಿನ ಮಕ್ಕಳು ರೈನ್ ಕೋಟ್ ಹಾಕಿಕೊಂಡು ಬರುತ್ತಿರುವುದು ಮತ್ತು ಅವರ ಹಿಂದೆ ಒಬ್ಬ ಹುಡುಗ ಒಬ್ಬಳು ಹುಡುಗಿ ಕೊಡೆ (ಛತ್ರಿ) ಹಿಡಿದು ತಮಾಷೆಯಲ್ಲಿ ಮಾತನಾಡುತ್ತ ಹೆಜ್ಜೆಯನ್ನಾಕುತ್ತಿರುವುದು ಕಣ್ಣಿಗೆ ಬಿತ್ತು. ಅಲ್ಲಿಗೆ ನನ್ನ ಪ್ಲಾಷ್‍ಬ್ಯಾಕ್ ಒಪನ್ ಆಯ್ತು.
     ನಮ್ಮೂರಿನಿಂದ ಹೈಸ್ಕೂಲಿಗೆ ಹೋಗಬೇಕೆಂದರೆ 2 ಕಿ.ಮೀ ಇರುವ ಪಕ್ಕದ ಊರಿಗೆ ಹೋಗಬೇಕು. ಪ್ರತಿ ದಿನದ ನಮ್ಮ ಸವಾರಿ ನಟರಾಜ ಸರ್ವಿಸ್‍ನಲ್ಲೇ ಸಾಗುತ್ತಿತ್ತು. ಅದು ಮಳೆಗಾಲ ಬೇರೆ ಜೋರು ಮಳೆ ಶುರುವಾಗುವುದರಲ್ಲಿತ್ತು. ಸಂಜೆ ಶಾಲೆ ಬಿಟ್ಟಾಗ ಇನ್ನೇನು ಮಳೆ ಬೀಳುವುದರಲ್ಲಿತ್ತು ಅಷ್ಟರಲ್ಲಿ ಮನೆ ಸೇರಿಬಿಡೋಣವೆಂದು ನಡಿಗೆ ಜೋರುಮಾಡಿದೆ.
  ಊಹೆಯಂತೆ ಅಂತೂ ಇಂತೂ ಮಳೆ ಬಂದೇ ಬಿಟ್ಟಿತು ಆಸರೆ ಪಡೆಯಲು ಪಕ್ಕದಲ್ಲಿ ಯಾವುದಾದರು ಮನೆ-ಮಠ ಕಾಣುವುದೇನೋ ಎಂದು ನೋಡಿದರೆ ನನ್ನ ದುರಾದೃಷ್ಟಕ್ಕೆ ಯಾವುದು ಕಾಣಲಿಲ್ಲ ಕೊನೆಗೆ ಪಕ್ಕದಲ್ಲಿದ್ದ ಮರದ ಕೆಳಗೆ ನೆರವನ್ನು ಪಡೆದೆ, ಅದೋ ಮಳೆ ಹನಿ ಜೋರು ಮಳೆಯಿಂದ ಮೈ ನೆನಸಿದರೆ ಮರದ ಹನಿ ನಿಧಾನವಾಗಿ ನನ್ನನ್ನು ಒದ್ದೆ ಮಾಡುತ್ತಿತ್ತು. ಕರ್ಮ ಎಂದು ಜೋರು ಮಳೆಯನ್ನ ನೋಡುತ್ತಿರುವಾಗ ದೂರದಲ್ಲಿ ಮಳೆಯ ಶಬ್ದಕ್ಕೆ ಹಿಮ್ಮೇಳವನ್ನು ಹಾಕುತ್ತಿರುವಂತೆ ಗೆಜ್ಜೆ ಸಪ್ಪಳ ಕೇಳಿಸಿತು. ಯಾರಿರಬಹುದೆಂದು ದಿಟ್ಟಿಸಿ ನೋಡಿದೆ ಕಪ್ಪನೆಯ ಮೋಡದಿಂದ ಜಾರಿ ಭೂಮಿಗೆ ಬೀಳುವ ಮಳೆ ಹನಿಗಳನ್ನು ಸೀಳಿಕೊಂಡು ಕಡು ಕಪ್ಪನೆಯ ಕೊಡೆ (ಛತ್ರಿ) ಹಿಡಿದು ಬರುತ್ತಿರುವÀ ಹುಡುಗಿಯೊಬ್ಬಳು ಕಾಣಿಸಿದಳು. ಯಾರಿರಬಹುದೆಂದು ಕುತೂಹಲದಿಂದ ನೋಡುತ್ತ್ತಿರುವಾಗ ಹತ್ತಿರ ಸಮೀಪಿಸುತ್ತಿದ್ದಂತೆ ಮುಂದೆ ಬಾಗಿದ ಕೊಡೆಯನ್ನು ನಿಧಾನವಾಗಿ ಮೇಲಕ್ಕೆ ಎತ್ತಿದರು ಮುಖ ನೋಡಿ ಅರೆ ಕ್ಷಣ ಬೆಚ್ಚಿ ಬಿದ್ದೆ ಯಾಕೆಂದರೆ ಆಕೆ ಬೇರೆ ಯಾರು ಅಲ್ಲ ನಮ್ಮ ಶಾಲೆಯ ನಂಬರ್ ಒನ್ ಸ್ಟೂಡೆಂಟ್ ಎಂದು ಹೆಸರು ಪಡೆದಿರುವ ಅಂಬಿಕಾ. ಅವಳ ಜೊತೆ ನಾನೇನು ಜಗಳವಾಡಿರಲಿಲ್ಲ ಆದರೆ ನನಗೆ ಅವಳ ಕಂಡರೆ ಆಗುತ್ತಿರಲಿಲ್ಲ.
    ನಾನು ಮಳೆಯಲ್ಲಿ ನೆನೆಯುವುದನ್ನು ಕಂಡು ಹೇಯ್ ಬಾರೋ ಎಂದು ಕರೆದಳು. ನಮಗೆ ಸ್ವಲ್ಪ ಧಿಮಾಕು ಹುಡುಗಿಯರನ್ನ ಮಾತನಾಡಿಸಬೇಕಂದ್ರೆ ಆಗಲ್ಲ ಅಂತದರಲ್ಲಿ ನಾನು ಇವಳ ಜೊತೆ ಹೋಗುವುದ? ಊರಿನ ಜನ ನೋಡಿದ್ರೆ ಏನ್ ತಿಳ್ಕೊತಾರೆ ಎಂದು ಇಲ್ಲ ನೀನು ಹೋಗು ಎಂದೆ. ಹೇಯ್ ಮಳೆ ಬೇರೆ ಬಿಡೊಹಾಗೆ ಹಾಣಲ್ಲ, ಕತ್ತಲು ಬೇರೆ ಆಗ್ತಿದೆ ಬೇಗ ಬಾರೋ ಎಂದು ರೇಗಿದಳು. ಇವಳದೊಂದು ಕಾಟ ಆಯ್ತಲ್ಲಪ್ಪ, ಮಳೆ ಬಿಟ್ರೆ ಆಯ್ತು ಬಿಡದಿದ್ರೆ ಆಯ್ತು ಸರಿ ಎಂದು ಅವಳ ಜೊತೆ ಹೆಜ್ಜೆ ಹಾಕಿದೆ.
ಎಲ್ಲಿ ನಿನ್ನ ಡಬ್ಬ ಫ್ರೆsÀ್ರಂಡ್ಸ್ ಕಾಣಿಸ್ತಿಲ್ಲ ಎಂದು ನನ್ನ ರೇಗಿಸಿದಳು, ನಿನ್ನ ಡಬ್ಬ ಫ್ರೆsರಂಡ್ಸ್ ಬಂದಿಲ್ಲವಲ್ಲ ಅದಕ್ಕೆ ಅವರು ಬಂದಿಲ್ಲ ಎಂದೆ ಹೀಗೆ ಮಾತುಗಳ ಸರಮಾಲೆ ಮುಂದು ವರೆಯುತ್ತಿತ್ತು ಒಂದು ಸಲ ಅವಳ ಕಣ್ಣುಗಳನ್ನೊಮ್ಮೆ ನೋಡಿದೆ ಮೊದಲಿನ ಅಂಬಿಕಳಿಗೂ ಅಂದು ನಾನು ನೋಡಿದ ಅಂಬಿಕಾಳಿಗೂ ತುಂಬಾ ವ್ಯತ್ಯಾಸ ಇತ್ತು. ಒಂದೆರಡು ಸಾರಿ ಅವಳ ಕಣ್ಣುಗಳನ್ನು ನೋಡಿದೆ ಅವಳು ನನ್ನ ಮುಖವನ್ನು ನೋಡಿದಳು ಅವಳ ನೋಟವನ್ನು ಎದುರಿಸಲಾಗದೆ ತಲೆ ತಗ್ಗಿಸಿ ನಡೆದೆ. ದಾರಿಯುದ್ದಕ್ಕೂ ಹರಟೆ, ತಮಾಷೆಯ ಮಾತುಗಳು ಬ್ರೇಕ್ ಇಲ್ಲದ ಬಸ್ಸಿನ ಹಾಗೆ ಸಾಗುತ್ತಿದ್ದವು.
    ಅಷ್ಟರಲ್ಲಿ ಮನೆ ಬಂದೇ ಬಿಟ್ಟಿತ್ತು ಅವಳನ್ನು ಅವಳ ಮನೆ ಹತ್ತಿರ ಬಿಟ್ಟು ನನ್ನ ಮನೆ ಕಡೆ ಹೆಜ್ಜೆ ಹಾಕಿದೆ ಮಳೆಯಲ್ಲಿ ಹಾಗೆ ಹೋಗ ಬೇಡ ಎಂದು ಅವಳು ಹಿಡಿದಿದ್ದ ಕೊಡೆಯನ್ನು ನನಗೆ ಕೊಟ್ಟು ಕಳಿಸಿದ್ದಳು ಅದರಲ್ಲಿ ಅವಳು ಹಾಕಿದ್ದ ಬಟ್ಟೆಯ ತುಣುಕೊಂದು ಸಿಕ್ಕಿ ಹಾಕಿಕೊಂಡಿತ್ತು. ಅದನ್ನು ನಾನು ಗಮನಿಸಿದ್ದು ಮಲಗುವ ಮನ್ನ ಆ ಕೊಡೆಯನ್ನ ಎತ್ತಿ ಹಿಡುವಾಗ. ಹೀಗೆ ಆರಂಭವಾದ ಮುಂಗಾರಿನ ಮಧುರ ಗಳಿಗೆಯ ನೆನಪು ಕೊನೆಗೆ ಹೋಗಿ ತಲುಪಿದ್ದು ಪ್ರೀತಿ ನಿವೇದನೆಯವರೆಗೆ ಅವಳಿಂದ ಬಂದ ಉತ್ತರ ಒಂದೆ, ಸಾರೀ ನಿನ್ನ ಮೇಲೆ ಆ ತರ ಯಾವುದೇ ಭಾವನೆಗಳಿಲ್ಲ, ಚೆನ್ನಾಗಿ ಓದಿ ಒಳ್ಳೆ ಕೆಲಸ ಹಿಡಿದು ಮುಂದೆ ಬಾ ನಿನಗೆ ನನಗಿಂತ ಒಳ್ಳೆ ಹುಡುಗಿ ಸಿಗ್ತಾಳೆ ಎಂದು. ಎಲ್ಲಾ ಹುಡುಗಿಯರು ಹೇಳುವ ಡೈಲಾಗ್ ಅನ್ನೆ ಇವಳು ಹೇಳ್ತಿದಳೆ, ಇವಳು ಹೇಳಿದ್ರೆ ನಾವು ಜೀವನದಲ್ಲಿ ಮುಂದೆ ಬರೋದು ಇಲ್ಲ ಅಂದ್ರೆ ಮುಂದೆ ಬರೋಕೆ ಆಗಲ್ಲ ಎಂದು ಮನಸ್ಸಿನಲ್ಲಿ ಗೊಣಗುತ್ತ ಅವಳಿಂದ ದೂರ ಇರಲು ಆರಂಭಿಸಿದೆ. ಆ ಘಟನೆ ನಡೆದು ಇಂದಿಗೆ 6 ವರ್ಷ ಇದು ನೆನ್ನೆ ಮೊನ್ನೆ ನಡೆದ ಹಾಗಿದೆ. ಈಗ ನನ್ನ ಮುಂದೆ ಇರುವುದು ಆ ನೆನಪು ಮಾತ್ರ.
   ಅಷ್ಟರಲ್ಲಿ ಮಳೆನಿಂತು ಕಪ್ಪು ರಸ್ತೆಯ ಮೇಲೆ ನೀರು ಹರಿಯಲು ಆರಂಭಿಸಿತ್ತು. ಮತ್ತೆ ಮಳೆ ಬರುವ ಎಲ್ಲ ಲಕ್ಷಣಗಳು ಎದ್ದು ಕಾಣಿಸುತ್ತಿತ್ತು ನಡೆದುಕೊಂಡು ಹೊದರೆ ಮತ್ತೆ ಅಂಬಿಕಾ ಬಂದು ಕೊಡೆ ಹಿಡಿಯುವುದಿಲ್ಲ ಎಂದು ಆಟೋ ಹಿಡಿದು ಮನೆಕಡೆ ನಡೆದೆ.
ಹಿಂಡಿಸಿಗೆರೆ ಮಂಜುನಾಥ ಹೆಚ್.ಆರ್.
E-mail : manjunathahr1991@gmail.com

No comments:

Post a Comment