Thursday 10 March 2016

ಗೌರವ ಕಲಿಸಿದ ಕನ್ಯೆ


ಗೌರವ ಕಲಿಸಿದ ಕನ್ಯೆ

    ತುಂಬಾ ಒರಟು ಮೈಕಟ್ಟು, ಬಿರು ನಡೆ, ಕಟು ಮಾತು, ಮುಖ ನೋಡಲು ಹೆದರುವ ಹುಡುಗಿಯರು ಹೀಗಿರುವಾಗ ಹೆಣ್ಣಿನ ಬಗ್ಗೆ ಅಸಹನೆ, ಅಶಾಂತಿ. ಯಾರಾದರು ಮಾತನಾಡಲು ಹತ್ತಿರ ಬಂದರೆ ಹೆಣ್ಣು ಎಂಬ ಕಾರಣಕ್ಕೆ ಮುಖ ತಿರುಗಿಸಿಕೊಂಡು ಹೋಗುವ ಮನೋಭಾವ ನನ್ನದು. ನನಗೆ ಜನ್ಮ ನೀಡಿರುವವಳು ಒಬ್ಬಳು ಹೆಣ್ಣು, ನನ್ನ ಒಡ ಹುಟ್ಟಿದ ಅಕ್ಕ ಒಬ್ಬಳು ಹೆಣ್ಣು ಎಂಬುದನ್ನು ಮರೆತು ಹೆಣ್ಣಿನ ಬಗ್ಗೆ ಒಂದು ರೀತಿಯ ಅಪವಾದದ ಮನೋಭಾವವಿತ್ತು. 
   ಮನೆಗೆ ಹಿರಿಯ ಮಗ ನಾನೇ ಪ್ರತಿ ಕೆಲಸದಲ್ಲೂ ನಾನೇ ಇರಬೇಕು. ಎಲ್ಲಾ ಹೊರೆ ನನ್ನ ಮೇಲೆ. ಅವಳು ಹೆಣ್ಣು ಎಂಬ ಮಾತ್ರಕ್ಕೆ ಕೆಲವು ಕೆಲಸದಲ್ಲಿ ರಿಯಾಯ್ತಿ. ತಮ್ಮ ಚಿಕ್ಕವನು. ಇನ್ನೂ ಶಾಲೆಯ ವಿಷಯಕ್ಕೆ ಬಂದರೆ ಶಾಲೆಯಲ್ಲಿ ಸಿಗುವ ಎಲ್ಲಾ ಸವಲತ್ತು ಅವರಿಗೆ ನಾವು ಗಂಡು ಮಕ್ಕಳಾದ ಕಾರಣ ಅದರ ಭಾಗ್ಯ ನಮಗಿಲ್ಲ. ಶಿಕ್ಷಕರನ್ನ ಕೇಳಿದರೆ ಅವರ ಮೇಲೆ ಮೊದಲಿನಿಂದ ಶೋಷಣೆಯಾಗುತ್ತಿದೆ. ಅವರನ್ನ ಮೆಲೆತ್ತಲು ಸರ್ಕಾರ ಅವರಿಗೆ ಇಂತಹ ಸೌಲಭ್ಯವನ್ನ ನೀಡುತ್ತಿದೆ ಎನ್ನುತ್ತಾರೆ. ಅದರಲ್ಲಿ ನನ್ನ ನಂಬಿಕೆಯೇನು ಇರಲಿಲ್ಲ ಯಾಕೆಂದರೆ ಅವರೇ ಹೇಳಿದಂತೆ ವೇದಗಳ ಕಾಲದಲ್ಲಿ ಅವರಿಗೆ ಸೂಕ್ತ ಸ್ಥಾನ ಮಾನ ಇತ್ತು. ಇದು ನನ್ನ ತಲೆಯಲ್ಲಿ ಆಳವಾಗಿ ಬೇರೂರಿದ್ದು. ಇದು ಸಾಲದೆಂಬಂತೆ ಉದ್ಯೂಗದಲ್ಲಿ ಅವರಿಗೆ ಮೀಸಲಾತಿ ಇದೆಲ್ಲ ಕೇಳಿ ಮನಸ್ಸಿಗೆ ನೋವಾಗಿದ್ದು ಉಂಟು.
    ಆಗ ಬಿ.ಎಡ್ ವಿದ್ಯಾರ್ಥಿ ಜೀವನದ ಆರಂಭದ ದಿನಗಳು ಆಕಸ್ಮಿಕವಾಗಿ ಒಂದು ಹುಡುಗಿ ತನ್ನ ಪರಿಚಯ ಮಾಡಿಕೊಂಡಳು. ನನಗೆ ಮುಖ ನೋಡಲು ಆಗದ ಸ್ಥಿತಿಯಲ್ಲಿ ದೂರದಿಂದಲೇ ಮಾತನಾಡಿಸಿ ಕಳಿಸಿದೆ. ಮತ್ತೆ ಮಾರನೇ ದಿನ ಹಾಯ್ ಮಂಜು ಟಿಫನ್ ಆಯ್ತ ಎಂಬ ಪ್ರಶ್ನೆಗೆ ಆಗಿಲ್ಲ ಅಂದ್ರೆ ಕೊಡಿಸ್ತಿರ ಎಂಬ ಕೋಪದ ನುಡಿ ಹೊರ ಬಂತ್ತು. ಬೇರೆ ಯಾರಾದರು ಆಗಿದ್ದಿದ್ದರೆ ಇವನ ಸಹವಾಸವೇ ಬೇಡವೆಂದು ದೂರ ಉಳಿಯುತ್ತಿದ್ದರು ಆದರೆ ಅವಳು ನನ್ನನ್ನು ಬದಲಾಯಿಸಲು ಪಣ ತೊಟ್ಟವಳಂತೆ ನಾನು ಏನೆ ಮಾತನಾಡಿದರು. ಹೇಗೆ ಮಾತನಾಡಿದರು ಅವಳು ಮಾತ್ರ ಕೋಪ ಮಾಡಿಕೊಳ್ಳದೆ. ನಗು ಮುಖದಿ ಮಾತನಾಡುತ್ತಿದ್ದಳು. ಅವಳು ಮಾತನಾಡುವಾಗ ನನ್ನ ದೃಷ್ಟಿ ಬೇರೆಡೆಗೆ ಇರುತ್ತಿತ್ತು. ರೀ ಆ ಕಡೆಯಲ್ಲ ನಾನಿರುವುದು ಇಲ್ಲಿ ನನ್ನ ಮುಖ ನೋಡಿಕೊಂಡು ಮಾತನಾಡಿ ಎಂದು ನಗು ಮುಖದಿ ನನ್ನ ಒಳ ಅಹಂಕಾರವನ್ನು ಕೆಣಕಿದಳು. 
   

ಅಂದಿನಿಂದ ನಾನ್ ಯಾರಿಗೂ ಹೆದರದವನಲ್ಲ ಅವಳ ಮುಖ ಅಷ್ಟೆ ತಾನೇ, ನೋಡಿಕೊಂಡು ಮಾತನಾಡಿದರೆ ಆಯ್ತು ಎಂದು ಅಂದಿನಿಂದ ಅವಳ ಮುಖವನ್ನು ನೋಡಿ ಮಾತನಾಡಲು ಆರಂಭಿಸಿದೆ. ನಿಧಾನವಾಗಿ ನನಗೆ ಗೊತ್ತಿಲ್ಲದೆ ನಾನು ಬದಲಾಗುತ್ತಾ ಹೋದೆ. ಆಗಲೇ ತಿಳಿದಿದ್ದು ಹೆಣ್ಣು ಎಂದರೆ ಸಹನೆ, ಹೆಣ್ಣು ಎಂದರೆ ತಾಳ್ಮೆ, ಹೆಣ್ಣು ಎಂದರೆ ಶಾಂತಿ, ಪ್ರೀತಿ ಎಂದು.

ಮಂಜುನಾಥ ಹೆಚ್.ಆರ್
email : manjunathahr1991@gmail.com

No comments:

Post a Comment