Monday 7 March 2016

ಫೇಸ್‍ಬುಕ್ (ಮುಖ) ಗೆ ಬಂದಿರೋಳು ಹಾಟ್ಸ್‍ಅಪ್ (ಹೃದಯ) ಕ್ಕೆ ಬರಲ್ಲವ ?


ಮೊದಲ ನೋಟವೇ ಸಾಕಿತ್ತು.......! 
   ಮೋಡದ ನಡುವೆ ಮಳೆ ಹನಿಯೊಂದು ಇಣುಕಿ ಭೂಮಿಯನ್ನು ಸ್ಪರ್ಶಿಸುವಂತೆ ಜನ ತುಂಬಿದ್ದ ಬಸ್ಸಿನಲ್ಲಿ ಆಕೆಯ ಕೈ ಸೋಕಿದಾಗ ಮೈಯಲ್ಲೆನೋ ರೋಮಾಂಚನ, ಮನದಲ್ಲಿ ತಳಮಳ ಹೃದಯದ ಬಡಿತ ನನ್ನ ಮಾತು ಕೇಳದೇ ಜೋರಾಗಿ ಬಡಿಯಲಾರಂಭಿಸಿತು. ಜನರ ನೂಕು-ನುಗ್ಗಲಿನಿಂದ ಬಸ್ಸಿನ ಒಳಗೆ ಹೋದೆ ಆಕೆಯನ್ನು ಬಿಟ್ಟು. ಆ ಜನರ ಮಧ್ಯದಲ್ಲಿ ಅವಳ ಮುಖವನ್ನು ನೋಡಲು ಹರಸಾಹಸವನ್ನು ಪಟ್ಟು. ಅವಳ ಕೇಶದ ಮರೆಯಿಂದ ಸುಂದರ ನಗುಮೊಗವನ್ನು ಒಮ್ಮೆ ತೋರಿಸಿದಳು.
  ನನ್ನ ಹೃದಯದ ಸಂತೋಷಕ್ಕೆ ಪಾರವೇ ಇರಲಿಲ್ಲ, ನೋಡಿದಷ್ಟು ನೋಡಬೇಕೆನಿಸುತ್ತಿತ್ತು ಅವಳ ನಗುವನ್ನ. ನನ್ನ ಆನಂದವನ್ನು ಅದುಮಿಡಲಾಗದೆ ಆ ಕ್ಷಣವೇ ಗೆಳೆಯನಿಗೆ ಅವಳ ವರ್ಣನೆಯನ್ನು ಮೆಸೆಜ್ ಮೂಲಕ ಹರಿದುಬಿಟ್ಟೆ. ಅವನಿಂದ ಒಂದು ರೀಪ್ಲೇ ಬರದಿದ್ದರು ನನ್ನ ವರ್ಣನೆ ಸಾಗುತ್ತಿತ್ತು. ಅವಳು ನನ್ನೊಮ್ಮೆ ನೋಡಿದರೆ ಸಾಕು ನನ್ನ ಜೊತೆ ಮಾತನಾಡಿದ ಅನುಭವವಾಗುತ್ತಿತ್ತು. ನನ್ನ ನೋಡಿ ನಕ್ಕರೆ ಸಾಕು ನನ್ನ ಜೊತೆ ಏಳು ಹೆಜ್ಜೆ ಹಾಕಿದ ಹಾಗೆ, ಮುಂಗುರುಳನ್ನು ಪದೇ ಪದೇ ಕಿವಿಯ ಕಡೆ ಸಿಕ್ಕಿಸುವಾಗ ನನ್ನ ಮುಖದ ಸ್ಪರ್ಶವಾದಂತೆ, ಕಣ್ ರೆಪ್ಪೆಗಳು ನನ್ನನ್ನೆ ಆಕೆಯ ಬಳಿಗೆ ಕರೆದಂತೆ ಕುಡಿ ನೋಟವು ನನ್ನ ಹೃದಯವು ಅವಳ ಹೃದಯವನ್ನು ಸೇರಲು ಅನುಮತಿಯನ್ನು ನೀಡಿದಂತೆ ಬಾಸವಾಗುತ್ತಿತ್ತು. ಅವಳ ಮಾತಿಗೆ ಸಹಕರಿಸುವ ತುಟಿಯು…............. ! ಬೇಡ ಬಿಡಿ ?  ಒಟ್ಟಾರೆ ಚಿನ್ನದ ಗಣಿ, ಕಾವೇರಿ ನದಿ, ಆ ಚಂದಿರನನ್ನು ಇವಳಿಗೆ ಹೋಲಿಸಿದರೆ ಕಡಿಮೆಯೇ. 
   ನೋಡಿದ ಹುಡುಗಿಯ ಮಾತನಾಡಿಸಬೇಕೆಂದು ಆ ಜನರ ನೂಕುನುಗ್ಗಲಿನಿಂದ ಜಗಳವಾಡುತ್ತಾ ದಾರಿ ಬಿಡಿಸಿಕೊಂಡು ಅವಳು ಇರುವಲ್ಲಿಗೆ ಬರುವುದರೊಳಗೆ ಅವಳು ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಳು. ಇರಲಿ ಇರಲಿ ಫೇಸ್‍ಬುಕ್ (ಮುಖ) ಗೆ ಬಂದಿರೋಳು ಹಾಟ್ಸ್‍ಅಪ್ (ಹೃದಯ) ಕ್ಕೆ ಬರಲ್ಲವ ಎಂದು ಅಂದಿನಿಂದ ಇಂದಿನವರೆಗೂ ಅವಳನ್ನ ಹುಡುಕುತ್ತಲೇ ಇದ್ದೇನೆ.  
ಮಂಜುನಾಥ ಹೆಚ್. ಆರ್

No comments:

Post a Comment